<ನಳಚರಿತ್ರೆ
ನಳಚರಿತ್ರೆ:ಏಳನೆಯ ಸಂಧಿ (ಸಂಗ್ರಹ)

ಕೇಳು ಧರ್ಮಜ ರತ್ನನಿರ್ಮಿತ 
ದಾಲಯದ ಸೊಬಗಿನಲಿಯೋಲಗ 
ಶಾಲೆಯಲಿ ಋತುಪರ್ಣನಿದ್ದನು ಸಿಂಹಪೀಠದಲಿ 
ಸಾಲ ಮಕುಟದ ನೃಪರು ಭೂಸುರ 
ಜಾಲ ಮಂತ್ರಿ ಪುರೋಹಿತರು ಗುಣ 
ಶೀಲರುನ್ನತಸತಿಯರಿಂದೆಸೆದಿರ್ದುದಾಸ್ತಾನ ||೧||

ಅವನಿಪತಿ ಕೇಳ್ ನಿಮ್ಮ ಪದಕಮ 
ಲವನು ಭಜಿಸುವೆ ಜೀಯ ಚಿತ್ತದಿ 
ಸವಡಿನುಡಿ ತನಗಿಲ್ಲ ಬಾಹುಕನೆಂಬುದಭಿಧಾನ
ಭುವನದೊಳು ತಾನಶ್ವಕುಲಹೃದ
ಯವನನು ಬಲ್ಲೆನು ಶಾಕಪಾಕದಿ 
ಸವಿಗೊಳಿಪ ವರವಿದ್ಯೆ ತನಗುಂಟೆಂದನವ ನಗುತ ||೩||

ಸೂಪಕಾರದೊಳಗ್ಗಳನು ಕಡು 
ರೂಪಿನವ ತಾನಲ್ಲ ಚಿತ್ತದಿ 
ಕಾಪುರುಷಷನೆನ್ನದಿರು ನೋಡಾ ತನ್ನ ಪೌರುಷವ 
ಭೂಪ ಮುಂಗೈಗಂಕಣಕೆ ಕುಲ 
ದೀಪ ಕನ್ನಡಿಯೇಕೆ ತರಿಸು ಪ್ರ 
ತಾಪದಾಜಿಯನೆಂದು ಬಿನ್ನೈಸಿದನು ನಸುನಗುತ ||೪||

ಪೊಡವಿಪತಿ ಋತುಪರ್ಣ ಬಾಹುಕ 
ನುಡಿದ ವಚನಕೆ ಮೆಚ್ಚಿ ಮನದು 
ಗ್ಗಡದ ತೇಜಿಯ ತರಿಸಿ ಕೊಡಲೇರಿದನು ಬೀದಿಯಲಿ 
ಮಡದ ಸನ್ನೆಗೆ ಕುಣಿದುರವೆಗಾ 
ಲಿಡುತ ಜೋಡಣೆಯಿಂದ ಹಯವಡಿ 
ಗಡಿಗೆ ಚಿಮ್ಮಿತು ವಾಯುವೇಗದೊಳರಸ ಕೇಳೆಂದ ||೫||

ಕರದ ವಾಘೆಯ ಸಡಿಲ ಬಿಡೆ ನಿ 
ಬ್ಬರದ ಗಮನದೊಳೈದಿತವನಿಯೊ 
ಳುರವಣಿಸಿ ಕೆಂಧೂಳಿ ಮುಸುಕಿದುದಂಬರವ ಬಿಡದೆ 
ಧರಣಿ ತಲ್ಲಣಿಸಿದುದು ಗಗನದಿ 
ಸುರರು ಕೊಂಡಾಡಿದರು ರಾವುತ 
ರರಸನಹುದೋ ಭಾಪು ಭಾಪೆಂದು ಸಮಸ್ತಜನ ||೬||

ಮುರುಹಿ ಹಿಡಿಯಲು ಮಡದ ಸನ್ನೆಗೆ 
ತಿರುಗಿತತಿವೇಗದಲಿ ಹಯವೋ 
ಸರಿಸಿ ಕಿರುಬೆಮರಿಡಲು ನಿಲಿಸುತ ವಾರುವವನಿಳಿದು 
ಕರವ ಮುಗಿಯಲು ನೃಪತಿ ಮೆಚ್ಚುತ 
ತರಿಸಿ ಕೊಟ್ಟನು ಭೂಷಣಂಗಳ 
ಹಿರಿದು ಸಂಬಳವಿತ್ತು ನಿಲಿಸಿದನರಸ ಬಾಹುಕನ ||೭||

ಜನಪ ಕೇಳ್ ಬಾಹುಕನು ವಾಲಾ 
ಖ್ಯನಲಿ ಸಖ್ಯವ ಬೆಳಸುತಾತನ 
ನನುದಿನವು  ಕೂಡಿರ್ದನೊಂದಾನೊಂದುದಿನ ರಾತ್ರಿ 
ವನಜಮುಖಿ ದಮಯಂತಿಯೊಳು ಚುಂ 
ಬನ ಸರಸ ಸಲ್ಲಾಪದಿಂದಿಹ 
ಕನಸ ಕಂಡೆಚಚರದಿ ಕಾಣದೆ ಹಲುಬಿದನು ||೮||

ಹಾ ತರುಣಿ ನಳಿನಾಕ್ಷಿ ನಯಸು 
ಪ್ರೀತಿಪೂರ್ವಕದಿಂದ ಕನಸಲಿ 
ಮಾತುದೋರದೆ ಬಂದು  ನನ್ನಲಿ ಕರುಣದಿಂ ನೀನು 
ಧಾತುಗುಂದಿದೆನಕಟ ಅಸುರಾ 
ರಾತಿ ಬಲ್ಲನೆನುತ್ತ ಮನದಲಿ 
ಕಾತರಿಸಿ ನಿಜಸತಿಗೆ ಹಲುಬಿದ ಮದನನೆಸುಗೆಯಲಿ ||೯|
ವಿಕಳನು ವಾಲಾಖ್ಯ ಕೇಳಿದು 
ಪಕಪಕನೆ ನಗುತೆಂದನೆಲೆ ಬಾ 
ಹುಕನೆ ಹಲುಬುವುದೇನು ಕಾಂತೆಗೆ ತಕ್ಕ ಬೊಂತೆಯನು 
ಅಕಟ ನೀನತಿ ಚೆಲುವನೇ ಬಾ 
ಲಕಿ ನಿನಗೆ ತಕ್ಕವಳೊ ಲೋಕದಿ 
ಮಕರಕೇತನ ಮರುಳನೆಂದಪಹಾಸ್ಯಮಾಡಿದನು ||೧೦||

ಎಂದು ಹಾಸ್ಯವ ಮಾಡಿದವನೊಡ 
ನೆಂದನಾ ಬಾಹುಕನು ಪೂರ್ವದೊ 
ಳಂದು ಬ್ರಾಹ್ಮಣನೊಬ್ಬ ನಿಜಸತಿಯಗಲಿಯೆನುನೊಡನೆ 
ನೊಂದು ನುಡಿದನು ವಿರಹದಲಿಯದ 
ನಿಂದು ಕನಸಲಿ ಕಂಡು ಭ್ರಾಂತಿಯೊ 
ಳೆಂದಡದು ತಪ್ಪೇನು ಸತಿಸುತರಿಲ್ಲ ತನಗೆಂದ ||೧೧||

ಅರಸ ಕೇಳಾ ಪುರದೊಳೊಬ್ಬರಿ 
ಗರಿಯದಂದದಿ ನಳನಿರಲು ಭೂ 
ಸುರರ ಮತದಲಿ ಕೇಳ್ದ ಭೀಮನೃಪಾಲನೀ ಹದನ 
ಧರೆಯನೆಲ್ಲವ ಜೂಜಿನಲಿ ಪು 
ಷ್ಕರಗೆ ಸೋತು ನಳನೃಪನಡವಿಗೆ 
ತೆರಳಿದನು ಸತಿಸಹಿತವೆನೆ ಹೊರಳಿದನು ಶೋಕದಲಿ ||೧೨||

ಹಾ ಮಗಳೆ ದಮಯಂತಿ ನಿಷಧಸ 
ನಾಮನನು ಕೈಹಿಡಿದು ಬಾಳುವ 
ನೇಮವನು ಬಿಸುಟಡವಿಗಟ್ಟಿತೆ ವಿಧಿ ವಿಕರ್ಮಫಲ 
ಭೀಮನೃಪನುದರದಲಿ ಜನಿಸಿ ವಿ 
ರಾಮವಾದುದೆ ನಿನ್ನ ಸಿರಿಮುಖ 
ತಾಮರಸವನು ಕಾಣೆ ತೋರೆಂದರಸ ಹಲುಬಿದನು ||೧೩||

ಮಗಳೆ ಮೋಹದ ಸುತರನಾರಿಗೆ 
ತೆಗೆದು ಬಿಸುಟೆ ನಿರಾಶೆಯಲಿಯೀ 
ಬಗೆಗೆ ತಂದುದೆ ವಿಧಿಯು ನಿನ್ನನು ಹರಮಹಾದೇವ 
ಹೊಗಲುಬಹುದೇ ಕಾನನದೊಳಿಹ 
ಮೃಗಗಳಿಂದೇನಾದಳೋ ಪತಿ 
ಯಗಲಿದನೊ ಭೇತಾಳ ನುಂಗಿತೊಯೆನುತ ಹಲುಬಿದನು ||೧೪||

ಬಡವರುದರದೊಳುದಿಸಿ ಸುಖವನು 
ಪಡೆಯಲೊಲ್ಲದೆ ಬಂದು ನೀನೀ 
ಪೊಡವಿಪತಿಯುದರದಲಿ ಸಂಜನಿಸುವರೆ ಎಲೆ  ತಾಯೆ 
ಗಿಡಮೆಳೆಗಳಾರಣ್ಯದಲಿ ತನು 
ವಿಡಿದು ಸೈರಿಪುದೆಂತು ಮಗಳೇ 
ಸುಡು ತನುವನಿದನೆಂದು ಮರುಗಿದಳವಳ ನಿಜಜನನಿ ||೧೫||

ಸತಿಪತಿಗಳೀಪರಿಯ ಶೋಕೋ 
ನ್ನತಿಯ ಸೈರಿಸಲಾರದಾ ಮಾ 
ರುತನಸಖನೊಳು ಪುಗುವೆವೆಂದುರವಣಿಸಿ ನಡೆತರಲು 
ಕ್ಷಿತಿಪ ಕೇಳಿಂತವರು ಬರುತಿರೆ 
ಮತಿಯುತನೆ ಚಿಂತೆಯನು ಬಿಡು ಪತಿ 
ವ್ರತೆಗೆ ಹಾನಿಯೆ ಸುಖದೊಳಿಹಳೆಂದುದು ನಭೋನಿನದ ||೧೬||

ಎಂದ ವಾಕ್ಯವ ಕೇಳಿ ಭೂಸುರ 
ವೃಂದದಲಿ ಮುನಿಯೋರ್ವ ನುಡಿದನು 
ಸಂದ ಪರಮಾನಂದಜ್ಯೋತಿರ್ಮಯನ ವಾಕಯಮಿದು 
ಇಂದುಮುಖಿ ದಮಯಂತಿ ನಳನೃಪ 
ರೆಂದಿಗೂ ಸುಕ್ಷೇಮಿಗಳು ನೀ 
ವಿಂದು ಕಳುಹಿಸಿ ಚರರ ಭೇದಿಸಲೆಂದನಾ ಮುನಿಪ ||೧೭||

ಅರಸ ಕರೆಸಿ ವಿಪ್ರರನು ಭೂ 
ಸುರರಿಗೆಂದನು ನೀವು ಕರುಣದಿ  
ಧರೆಯೊಳೆಲ್ಲಿಹಳೆನ್ನ ಸುತೆ ದಮಯಂತಿ ನಳನೃಪರ 
ಇರವ ಕಾಂಬುದು ಕಂಡು ಕರೆತಂ 
ದರಿಗೆ ಕೊಡುವೆನು  ಧರೆಯೊಳರ್ಧವ
ನಿರುತವೆಂದುಪಚರಿಸಿ ಕಳುಹಿದ ಭೀಮನೃಪವರ ||೧೯||

ಹರಿದರರಸಾಳುಗಳು ಪಶ್ಚಿಮ 
ಶರಧಿ ದಕ್ಷಣಶರದಿ ಪೂರ್ವದ 
ಶರಧಿಯುತ್ರರ ಕುರುನರರೇಂದ್ರರ ಸೀಮೆ ಪರಿಯಂತ 
ಪುರಗಳಲಿ ವನವೀದಿಯಲಿ ತ 
ದ್ಗಿರಿಗಳಲಿ ನಾನಾ ದಿಗಂತದೊ 
ಳರಸಿ ಕಾಣದೆ ಮುಂದೆ ನಡೆದರು ಹಲವು ದಿವಸದಲಿ ||೨೦||

ಪುರನಗರ ಬೀದಿಗಳ ಮಧ್ಯದಿ 
ನೆರೆದ ಸಭೆಯಲಿ ಮಾರ್ಗದಲಿ ಸಂ 
ಚರಿಸುವವರನು ಕಂಡು ಕೇಳುತ ಬಂದರಲ್ಲಲ್ಲಿ 
ಇರವ ಕಾಣದೆ ಬಳಲಿ ಚಿಂತಿಸಿ 
ಮರುಗುತವನೀಸುರರು ಭೇದಿಸು 
ತಿರಲು ಮೂವರು ಬೇರೆ ಹೊಕ್ಕರು ಚೈದ್ಯನಗರಿಯನು ||೨೧||

ಜನಪನವನೀಸುರರ ಮಂತ್ರದ 
ಲನಿಲಸಖನಾರಾಧಿಸಲು ನೃಪ 
ತನುಜೆಯಾದ ಸುನೀತೆಯೊಳು ದಮಯಂತಿ ಭಾವಿಸುತ 
ವನಿತೆಯಿರೆ ಕಂಡನು ಸುದೇವನು 
ಮನದೊಳನುಮಾನಿಸಿದನೀ ಮಾ 
ನಿನಿ ಮಹಾಸತಿಯೆನುತ ವಿಸ್ಮಯಗೊಂಡ ಮನದೊಳಗೆ ||೨೩||

ಮುಗಿಲು ಮುಸುಕಿದ ಚಂದ್ರಬಿಂಬವೊ 
ಪಗಲೊಳೆಸೆವ ಸುದೀಪಕಾಂತಿಯೊ 
ಹೊಗೆಯೊಳೆಸಗಿದ ಚಿತ್ರಪ್ರತಿಮೆಯೊ ಹೇಳಲೇನವಳ 
ಉಗಿದು ಬಿಸುಟ ವಿಭೂಷಣದ ಮೈ 
ಲಿಗೆಯ  ಸೀರೆಯ ಮಲಿನತನವನು ಕಳೆ 
ದೆಗೆದು ಕೈಗಲ್ಲದಲಿ ನಿಂದಿರೆ ಕಂಡನಾ ಸತಿಯ ||೨೪||

ಇದು ಪತಿವ್ರತಧರ್ಮವಹುದೀ 
ಸುದತಿ ತೊರೆದಿಹಳೆಲ್ಲವನು ನೃಪ 
ವಧುವ ಕಾಣಿಸಿಕೊಂಬೆನೆಂದು ಸುದೇವ ನಡೆತಂದು 
ಹದನಿದೇನೌ ತಾಯೆ ನಿಮ್ಮಯ 
ವದನಕಮಲವು ಬಾಡಿ ಕಡುಮಾ 
ಸಿದುಡುಗೆಯಲಿಹುದೇನು ಕಾರಣವೆನುತಲಿಂತೆಂದ ||೨೫||

ಇಂದುವದನೆ ವಿದರ್ಭಪಟ್ಟಣ 
ದಿಂದ ಬಂದೆನು ತಾನು ಭೂಸುರ 
ವಂದ್ಯನೆನ್ನಭಿಧಾನಕೇಳು ಸುದೇವನೆಂಬುವುದು 
ಇಂದು ನಿಮ್ಮನು ನೋಡ ಕಳುಹಿದ 
ತಂದೆ ಭೀಮನೃಪಾಲನಾತನ 
ನಂದನಗೆ ತಾ ಸಖನು  ಚಿತ್ತೈಸೆನ್ನ ಬಿನ್ನಪವ ||೨೬||

ಕ್ಷಿತಿಪ ಭೀಮನೃಪಾಲನಾತನ
ಸತಿಸುತರು ಬಾಂಧವ ಸಹೋದರ 
ರತಿಶಯರು ನಿಮ್ಮಯ ಕುಮಾರರು ಕುಶಲರಿಂದಿನಲಿ 
ಕ್ಷಿತಿಯನಗಲುತ ನಳನೃಪತಿ ನಿಜ 
ಸತಿಸಹಿತ ವನಕೈದಿದುದ ಕೇ 
ಳುತಲಿ ನಿಮ್ಮವರೆಲ್ಲ ಶೋಕಾಬ್ಧಿಯಲಿ ಮುಳುಗಿಹರು ||೨೭||

ಘೋರತರಶೋಕವನು ಸೈರಿಸ 
ಲಾರದಾ ಸತಿಪತಿಗಳಿಬ್ಬರು 
ಸೋರುತಿಹ ಕಂಬನಿಗಳಲಿ ಕರೆದೆಮ್ಮ ಕಳುಹಿದರು 
ಧಾರಿಣಿಯಲರಸುತಲಿ ಬಂದೆವು 
ವಾರಿಜಾನನೆ ನಿಮ್ಮ ಕಂಡೆವು 
ಸೇರಿತೆಮ್ಮಯ ಪುಣ್ಯವೆಂದು ಸುದೇವ ಕೈಮುಗಿದ ||೨೮||

ವನಿತೆ ಕೇಳುತ ಶೋಕಜಲದಲಿ 
ನೆನೆದು ಬುಧಕುಲತಿಲಕನನು ಬಾ 
ರೆನುತ ಮನ್ನಿಸಿ ತನ್ನವರನಡಿಗಡಿಗೆ ಬೆಸಗೊಳಲು 
ವನಿತೆ ನೋಡಿದಳಾ ಸುದೇವನ 
ಜನನಿಗರುಹಲು ಬಂದಳಾ ವಿ 
ಪ್ರನನು ನೀವಾರೆನಲು ನುಡಿದನು ಬಂದ ಸಂಗತಿಯ ||೨೯||

ಕೇಳು ತಾಯೆ ವಿದರ್ಭಪತಿ ಭೂ 
ಪಾಲನಾತ್ಮಜೆ ಪತಿಯೊಡನೆ ತ 
ನ್ನಾಲಯವನುಳಿದು ವನಕೈದಿದಳೆನಲು ನೃಪ ಕೇಳಿ 
ತಾಳಲಾರದೆ ನೋಡಿ ಕರೆತರ
ಹೇಳಿ ಕಳುಹಲು ಬಂದೆನಿಲ್ಲಿಗೆ 
ಬಾಲೆ ದಮಯಂತೆಯಳ ಕಂಡೆನೆನುತ್ತ ಕೈಮುಗಿದ ||೩೦||

ಕೇಳಿ ಶಿವಶಿವಯೆನು ತ ಶೋಕವ 
ತಾಳಿ ತೆಗೆದಪ್ಪಿದಳು ಮಗಳೆ ವಿ 
ಟಾಳಿಸಿತೆ ಸಿರಿ ರಾಜ್ಯಸಂಪದವೀ ಮಹಾವ್ಯಥೆಯ 
ಭಾಳದಲಿ ವಿಧಿ ಬರೆದನೇ ಜನ 
ಪಾಲ ನಳನೃಪನೆತ್ತ ಸರಿದನೊ 
ಕಾಲಗತಿಯಿಂತಾಯಿತೇ ಹಾಯೆನುತ ಮರುಗಿದಳು ||೩೧||

ಬಾಲೆ ಬಿಡು ಶೋಕವನು ಭೀಮನೃ 
ಪಾಲನರಸಿಗೆ ತಂಗಿ ತಾ ತ
ನ್ನಾಲಯದಿ ಕಡುನೊಂದೆ ಮಗಳೇ ಸಾಕು ನಮ್ಮೊಡನೆ 
ಪೇಳದಿಹರೆ ಸುನಂದೆಗೆ ಸಮ
ಪಾಳಿ ನೀನೆಮಗೆಂದು ತಳ್ಕಿಸಿ 
ಪಾಲಿಸಿದಳತಿಕರುಣದಲಿ ದಮಯಂತಿಯನು ಜನನಿ ||೩೨||

ಕಿರಿಯ ತಂದೆ ಸುಬಾಹು ಮರುಗಿದ 
ವರಕುವರಿ ದಮಯಂತಿ ನಿನ್ನಯ 
ಪುರುಷನಿಲ್ಲದೆ ಚಿಂತೆಯಿಂದೆಲ್ಲವನು ನೀ ತೊರೆದು 
ಕರಗಿ ಕಂದಿದೆ ಮಗಳೆ ತಾನಿಂ 
ತರಿದುದಿಲ್ಲಲ ನಿನ್ನ ಪುರುಷನ 
ಕರೆಸಿ ಕೊಡುವೆನು ನಾನು ಚಿಂತಿಸಬೇಡ ನೀನೆಂದ ||೩೩||

ತರಳೆ ಬಾರೆಂದೆನುತ ಕಣ್ಣಿನೊ 
ಳೊರೆವ ಕಂಬನಿಗಳನು ಸೆರಗಿನೊ 
ಳೊರಸಿ ದಮಯಂತಿಯನು ಮನ್ನಿಸಿ ಬಂದನೋಲಗಕೆ 
ಕರೆಸಿದನು ಭೂಸುರ ಸುದೇವನ 
ನಿರುತ ಮಣಿಭೂಷಣಗಳಿಂದುಪ 
ಚರಿಸಿ ಕಳುಹಲು ಬಂದ ಭೀಮನೃಪಾಲನೋಲಗಕೆ ||೩೪||

ಅರಸ ಕೇಳು  ವಿದರ್ಭಪತಿ ಮನ 
ಮರುಗುತಿರಲಾ ಸಮಯದಲಿ ಭೂ 
ಸುರ ಸುದೇವನು ಬಂದು ಕೈಮುಗಿದೆಂದನೀ ಹದನ 
ತರುಣಿ ದಮಯಂತಿಯನು ಕಂಡೆನು 
ಹರುಷ ಮಿಗಲಾ ಚೈದ್ಯಪುರದಲಿ
ವರಜನನಿ ಚಿಕ್ಕಮ್ಮನಲ್ಲಿಹಳೆಂದನಾ ವಿಬುಧ ||೩೫||

ದೂತರೈದಿದರೊಸಗೆಯಲಿ ಜನ 
ಜಾತ ನಲಿಯಲು ಬಂದು ಬೇಗದಿ 
ಭೂತಳೇಂದ್ರಗೆ ಕೈಮುಗಿದು ದಮಯಂತಿ ಬಂದಳೆನೆ 
ಮಾತ ಕೇಳಿದನದನು ಬಲಸಂ 
ಗಾತಲೈತಂದವರ ಕಂಡತಿ 
ಪ್ರೀತಿಯಿಂ ತಕ್ಕೈಸಿ ಕರೆತಂದನು ನಿಜಾಲಯಕೆ ||೪೧||

ಅವನಿಪತಿ ಕೇಳಾ ಪುರದೊಳು 
ತ್ಸವವನದನೇನನೆಂಬೆನಂದಿನ  
ದಿವಸದೊಳಗರಮನೆಯೊಳಾ ದಮಯಂತಿಯನು ಜನನಿ 
ತವಕದಿಂ ಬಿಗಿಯಪ್ಪಿದಳು ಬಾಂ 
ಧವರು ಸಂತೋಷಿಸಿದರನಿಬರು 
ಯುವತಿಯರು ನಿಜತನಯರಾಲಿಂಗಿಸಿದರಂಗನೆಯ ||೪೨||

ಮಗನ ನೋಡಿದಳಿಂದ್ರಸೇನನ 
ತೆಗೆದುತಕ್ಕೈಸಿದಳು ಕರೆದಳು 
ಮಗಳ ಚಂದ್ರಾಸ್ಯಳನು ತೊಡೆಯೊಳಗಿಟ್ಟು ಮಮತೆಯಲಿ 
ಮೊಗವನೀಕ್ಷಿಸಿ ಮೊಲೆಗಳಲಿ ತೊರೆ 
ದುಗುವ ಹಾಲಿನ ಜನನಿ ಮಿಗೆ ನೀ 
ರೊಗುವ ಕಣ್ಣೀರಿನಲಿ ಸಂತೈಸಿದಳು ನಿಜಸುತರ ||೪೩||

ನೋಡಿ
ನಳಚರಿತ್ರೆ- ಸಂಧಿಗಳು>:೧೨೩೪೫೬೭೮೯
ನೋಡಿ

ವರ್ಗ:ಕನಕದಾಸರ ಸಾಹಿತ್ಯ
ವರ್ಗ:ಕನ್ನಡ ಸಾಹಿತ್ಯ